ಬೈಕಾಲ್ ಸರೋವರ -
ದಕ್ಷಿಣ ಸೈಬೀರಿಯಾದಲ್ಲಿರುವ ಒಂದು ದೊಡ್ಡ ಸಿಹಿನೀರಿನ ಸರೋವರ. ಸೋವಿಯೆತ್ ಒಕ್ಕೂಟದ ಬುರ್ಯಾತ್ ಪ್ರಾಂತ್ಯದಲ್ಲಿದೆ. ಇದರ ವಿಸ್ತಾರ 31,500 ಚಕಿಮೀ ಇದ್ದು ಸೋವಿಯತ್ ಸರೋವರಗಳ ಪೈಕಿ ಮೂರನೆಯದೂ ಪ್ರಪಂಚದ ಸರೋವರಗಳ ಪೈಕಿ ಎಂಟನೆಯದೂ ಆಗಿದೆ. ನೈಋತ್ಯ ಈಶಾನ್ಯಾಭಿಮುಖವಾಗಿ ವ್ಯಾಪಿಸಿದೆ. ಉದ್ದ 636 ಕಿಮೀ. ಸರಾಸರಿ ಅಗಲ 48 ಕಿಮೀ. ಗರಿಷ್ಟ ಆಳ 1620ಮೀ. ಪ್ರಪಂಚದ ಅತ್ಯಂತ ಆಳದ ಸರೋವರವಿದು. ಭೂಮಿಯ ಮೇಲಿರುವ ಒಟ್ಟು ಸಿಹಿ ನೀರಿನ ಶೇಕಡಾ 20 ಭಾಗ ಈ ಒಂದು ಸರೋವರದಲ್ಲೇ ಇದೆ ಎಂದು ಹೇಳುತ್ತಾರೆ.

	ಇದರ ದಕ್ಷಿಣದಲ್ಲಿ ಏಷ್ಯದ ಅತ್ಯುನ್ನತ ಪ್ರಸ್ತಭೂಮಿಯೂ ಸುತ್ತ ಪರ್ವತಗಳೂ ಇವೆ. ಪರ್ವತಗಳಿಂದ ಹರಿದುಬರುವ ಸುಮಾರು 336 ನದಿ ತೊರೆಗಳು ಇಲ್ಲಿವೆ. ಇವುಗಳಲ್ಲಿ ಮುಖ್ಯವಾಗಿ ಸೆಲೆಂಗ, ಬಾರ್‍ಗುಜನ್ ಮತ್ತು ಮೇಲಣ ಅಂಗಾರ ಮೊದಲಾದ ನದಿಗಳಿಂದಲೂ ನೀರು ಪಡೆಯುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಆದಿಯಲ್ಲಿ ಹೆಪ್ಪುಗಟ್ಟುವ ಈ ಸರೋವರದ ನೀರು ಮೇ ಉತ್ತರಾರ್ಧದ ತನಕವೂ ಘನೀಭವಿಸಿರುತ್ತದೆ. ಸರೋವರದ ಸುತ್ತಣ ವಾಯುಗುಣ ಬೇಸಿಗೆ ಕಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇರುತ್ತದೆ.

	ಈ ಸರೋವರ ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿ ಸಂಪತ್ತಿಗೆ ಹೆಸರಾಗಿದೆ. ಜ್ಯೂರಾಸಿಕ್ ಯುಗದಲ್ಲಿಯೇ ಇದ್ದಿತೆಂದು ಊಹಿಸಬಹುದಾದ ಹಾಗೂ ಮಯೋಸೀನ್ ಯುಗದಲ್ಲಿ ಇದ್ದ ಅತ್ಯಂತ ಪ್ರಾಚೀನ ಸರೋವರವಾಗಿದ್ದು ಇದರಲ್ಲಿ ಜಗತ್ತಿನ ಜಲಚರ ಪ್ರಾಣಿಗಳ ವರ್ಗದಲ್ಲಿ ಅರ್ಧದಷ್ಟು ಇವೆ. ಸುಮಾರು 1700 ಬಗೆಯ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸಲಾಗಿದ್ದು ಅದರಲ್ಲಿ 1083 ಬಗೆಯವು ಪ್ರಪಂಚದ ಬೇರೆಲ್ಲೂ ಸಿಗದಂಥವು. ಇವುಗಳಲ್ಲಿ 184 ರಷ್ಟು ವಿಶಿಷ್ಟವಾದ ಜೀವಜಾತಿಗಳನ್ನು ಈ ಸರೋವರದಲ್ಲಿ ಮಾತ್ರ ಕಾಣಲು ಸಾಧ್ಯ. ಮುಖ್ಯ ಆಹಾರವಾಗಿ ಉಪಯೋಗಿಸಲಾಗುವ ಬೈಕಲ್ ಬಿಳಿಮೀನು ಹಾಗೂ ಇನ್ನಿತರ ಮೀನುಗಳನ್ನೂ ಬೈಕೆಲ್ ಸೀಲ್ ಪ್ರಾಣಿಗಳು ಇರುವ ಈ ಸರೋವರದಲ್ಲಿ ಅನೇಕ ವಿಶಿಷ್ಟ ಜೀವರಾಶಿಗಳನ್ನೂ ಕಾಣಬಹುದು

	1643ರಲ್ಲಿ ಮೊತ್ತ ಮೊದಲು ಅನ್ವೇಷಿಸಲಾದ ಬೈಕಾಲ್ ಸರೋವರದಲ್ಲಿ 1844ರಿಂದ ಯಾನಕ್ಕಾಗಿ ಉಗಿಹಡಗುಗಳನ್ನು ಬಳಸಲಾಗುತ್ತಿದೆ. ನೀರು ಹೆಪ್ಪುಗಟ್ಟಿರುವಾಗ ಸರೋವರ ಯಾನಕ್ಕೆ ಸ್ಲೆಜ್ ಗಾಡಿಗಳನ್ನೂ ಬಳಸಲಾಗುತ್ತದೆ. ಅನಿರೀಕ್ಷಿತ ಬಿರುಗಾಳಿಗಳಿಂದಾಗಿ ಮತ್ತು ಉತ್ತಮ ರೇವುಗಳಿಲ್ಲದಿರುವುದರಿಂದ ಸರೋವರ ಜಲಯಾನಕ್ಕೆ ಅಡಚಣೆಯಿದ್ದರೂ ಸರೋವರದ ಸುತ್ತಲ ಕೆಲವು ಪಟ್ಟಣಗಳಿಗೆ ಹಡಗು ಸಂಪರ್ಕವುಂಟು. ಟ್ರಾನ್ಸ್ ಸೈಬೀರಿಯನ್ ರೈಲು ಹಾಗೂ ಮೋಟಾರು ದಾರಿ ಈ ಸರೋವರದ ದಕ್ಷಿಣ ಭಾಗದಲ್ಲಿ ಹಾದು ಹೋಗಿವೆ. ಈ ಸರೋವರ ಓಲ್ಕನ್ ಎಂಬ ದೊಡ್ಡ ದ್ವೀಪ ಸಹಿತ ಒಟ್ಟು 18 ದ್ವೀಪಗಳನ್ನೊಳಗೊಂಡಿದೆ.
(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ